ಅಯೋನಿಯನ್ನರು

ಏಷ್ಯಮೈನರ್‍ನ ಪಶ್ಚಿಮ ತೀರದ ಒಂದು ಭಾಗಕ್ಕೂ ಮತ್ತು ಅದರ ಹತ್ತಿರ ಇರುವ ಕೆಲವು ಮೆಡಿಟರೇನಿಯನ್ ದ್ವೀಪಗಳಿಗೂ ಅಯೋನಿಯ ಎಂಬ ಹೆಸರಿದೆ. ಅಲ್ಲಿನ ಜನ ಅಯೋನಿಯನ್ನರು. ಕ್ರಿ.ಪೂ. ಹತ್ತು ಶತಮಾನಗಳ ಹಿಂದೆಯೇ ಅಥೆನ್ಸಿನಿಂದ ಗ್ರೀಕರು ಅಲ್ಲಿಗೆ ಬಂದು ನೆಲೆಸಿದ್ದರೆಂದು ಕಂಡುಬಂದಿದೆ. ಅಲ್ಲಿನ ಕೇರಿಯನ್ನರೇ ಮುಂತಾದ ಜನರೊಂದಿಗೆ ಬೆರೆತರೂ ಅವರ ಭಾಷೆ, ಸಂಸ್ಕøತಿ ಎಲ್ಲವೂ ಗ್ರೀಸಿನದೇ ಆಗಿ ಉಳಿಯಿತು. ಕ್ರಮೇಣ ಗ್ರೀಸಿನಲ್ಲಿದ್ದಂತೆ ಅಲ್ಲೂ ಕೆಲವು ನಗರರಾಜ್ಯಗಳೇರ್ಪಟ್ಟವು. ಈ ರಾಜ್ಯಗಳು ಸಡಿಲವಾದೊಂದು ಒಕ್ಕೂಟವನ್ನೂ ಏರ್ಪಡಿಸಿಕೊಂಡವು. ಹಿತಕರ ವಾಯುಗುಣ, ಫಲವತ್ತಾದ ಭೂಮಿ, ಸುರಕ್ಷಿತವಾದ ರೇವುಬಂದರುಗಳು-ಈ ಎಲ್ಲ ಅನುಕೂಲತೆಗಳಿಂದ ಅಯೋನಿಯನ್ನರು ಬೇಗ ಪ್ರಗತಿ ಹೊಂದಿ, ಪಶ್ಚಿಮದಲ್ಲಿ ಸ್ಪೇನಿನವರೆಗೂ ಪೂರ್ವದಲ್ಲಿ ಕಪ್ಪುಸಮುದ್ರ ತೀರಕ್ಕೂ ತಮ್ಮವರನ್ನು ವಲಸೆ ಕಳುಹಿಸಿದರು. ಕ್ರಿ.ಪೂ. 5ನೆಯ ಶತಮಾನದಲ್ಲಿ ಲಿಡಿಯದ ದೊರೆ ಕ್ರೀಸಸ್ ಅಯೋನಿಯವನ್ನು ಸ್ವಾಧೀನಪಡಿಸಿಕೊಂಡ. ಸ್ವಲ್ಪಕಾಲದ ನಂತರ ಪರ್ಷಿಯದ ದೊರೆ ಕೈರಸ್ ಮಹಾಶಯ ಕ್ರೀಸಸ್‍ನನ್ನು ಸೋಲಿಸಿದ ಮೇಲೆ ಅಯೋನಿಯ ಪರ್ಷಿಯದ ಆಡಳಿತಕ್ಕೆ ಒಳಪಟ್ಟಿತು. ಈ ಮಧ್ಯೆ ಅಯೋನಿಯನ್ನರು ಬೆಳೆಸಿಕೊಂಡು ಬಂದಿದ್ದ ಗ್ರೀಕ್ ಸಂಸ್ಕøತಿ ದೂರದೇಶಗಳಿಗೂ ಹರಡುತ್ತಿತ್ತು. ಕ್ರಿ.ಪೂ. 5ನೆಯ ಶತಮಾನದ ಪ್ರಾರಂಭದಲ್ಲೆ ಅಯೋನಿಯನ್ನರು ದಂಗೆಯೆದ್ದರು; ಅಥೆನ್ಸ್ ಮತ್ತು ಇತರ ಕೆಲವು ಗ್ರೀಕ್ ರಾಜ್ಯಗಳು ಅವರಿಗೆ ಬೆಂಬಲಕೊಟ್ಟವು. ಈ ದಂಗೆಯನ್ನು ಅಡಗಿಸಿದರೂ ಪರ್ಷಿಯದ ದೊರೆ ಡೇರಿಯಸ್ (ಮೊದಲನೆಯ) ಗ್ರೀಸಿನ ರಾಜ್ಯಗಳ ಮೇಲೆ ಯುದ್ದ ಹೂಡುವುದು ಅನಿವಾರ್ಯವಾಯಿತು. ಗ್ರೀಸಿಗೂ ಪರ್ಷಿಯಕ್ಕೂ ಯುದ್ಧನಡೆಯುತ್ತಿದ್ದ ಕಾಲದಲ್ಲಿ ಅಯೋನಿಯ ಶಾಂತಿಯನ್ನು ಕಾಣಲಿಲ್ಲ. ಅಲೆಕ್ಸಾಂಡರ್ ಅಯೋನಿಯವನ್ನು ಸುಲಭವಾಗಿ ಸ್ವಾಧೀನ ಪಡಿಸಿಕೊಂಡ. ಮುಂದೆ ಅದು ಮೊದಲು ಬೈಸಾನ್‍ಟೈನ್ ಸಾಮ್ರಾಜ್ಯಕ್ಕೆ, ಅನಂತರ ತುರ್ಕಿ ಚಕ್ರಾಧಿಪತ್ಯಕ್ಕೆ ಸೇರಿತು. ಈ ಕಾಲದಲ್ಲಿ ಜನಜೀವನವೇನೋ ನೆಮ್ಮದಿಯಾಗಿತ್ತು. ಅಯೋನಿಯನ್ನರು ತಮ್ಮ ಸಂಸ್ಕøತಿಯನ್ನು ಬೆಳೆಸಿಕೊಂಡು ಬಂದರು. ಮುಂದೆ ಅವರ ಪುರೋಭಿವೃದ್ಧಿ ಕುಂಠಿತವಾಯಿತು.		
  
(ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ